ಕ್ಷಣ ಹೊಸತು-ಯುಗಾದಿ
-----------------------------
ಹೊಸ ವರುಷದ ಹರುಷ ಹರಸಿದೆ
ಶಿಶಿರ ಹೊದಿಕೆಯ ಸರಿಸಿದೆ
ಬರಲು ಮರ ನೆಲಬಿರಿದ ಚಳಿ ಚಳಿ
ಮಗ್ಗುಲಾಗುತ ತೆರೆಳಿದೆ
ಹೂವು ಹಾಸಿದ ಹಾದಿಯಂಚಿಗೆ
ರಂಗವಲ್ಲಿಯ ಸೊಬಗಿದೆ
ಮಾವು ಮಲ್ಲಿಗೆ ಚಿಗುರು ಚೈತ್ರದ
ಹಕ್ಕಿ ಹಾಡಿನ ಇಂಪಿದೆ
ಮೋಡವಿಲ್ಲದ ಗಗನ ಪಥದಲಿ
ಸೂರ್ಯ ಚಂದ್ರರ ಸಂಗಮ
ಕಂಡು ಕಾಣದ ಚಂದ್ರ ರೇಖೆಯು
ಮೂಡೆ ಹರ್ಷದ ಸ್ಪಂದನ
ಹಿಂದೆ ಮುಂದಿದೆ ಕಾಲ ಹರಡಿದ
ಕ್ಷಣ ಹೊಸತು ಕ್ಷಣ ಆಶಯ
ಕತ್ತಲಂಚಿಗೆ ಬೆಳಕಿನೈಸಿರಿ
ಚಿಗುರು ಬೇವಿಗು ಸಿಹಿಬಲ
ಹಿತದ ಹೊಸ ಹೊಸ ಭಾವ ತುಂಬುವ
ನಸುನಗೆಯ ಒಡನಾಡಿಯ
ಬೆಸುಗೆಯಳಿಯದ ಚಿಗರು ತೂಗಲಿ
ಹೂವು ಹಣ್ಣಿನ ಗೊಂಚಲ
-ಗಜಾನನ ಈಶ್ವರ ಹೆಗಡೆ