Saturday, November 24, 2012

ಮುಸ್ಸಂಜೆ ರಂಗಲ್ಲಿ - ಸೈಕೋ



ಚಿತ್ರ: ಸೈಕೋ
ಸಂಗೀತ: ರಘು ದೀಕ್ಷಿತ್
ಗಾಯನ: ಸೈಂಧವಿ


ಮುಸ್ಸಂಜೆ ರಂಗಲ್ಲಿ ನಿನ್ನ, ಪ್ರೀತಿ ರಂಗಲ್ಲಿ ತೇಲಿ ಹೋದೆ
ನೀ ಯಾರೊ ಯಾವೂರೊ ಕಾಣೆ, ಹೇಗೊ ನನ್ನಲ್ಲಿ ಸೇರಿ ಹೋದೆ
ಹೃದಯವೇ ನೀ ಬಾ ಬೇಗ, ನಮದಾಗಲಿ ಪ್ರೇಮಾ ಸಂಯೋಗ ||

ಬಾನಲ್ಲಿ ಸಂತೋಷದಿ, ಹಾರಿದ್ದ ಬೆಳ್ಳಕ್ಕಿ ನಾ
ಇರಲಿಲ್ಲ ನನಗ್ಯಾವ ಬೇಲಿ
ನೀ ಪ್ರೀತಿ ಮಾತಾಡುತಾ ಬಲೆ ಬೀಸಿ ನಾ ಸಿಕ್ಕಿದೆ
ಹೊಸ ಪ್ರೇಮ ಸವಿ ಜಾಲದಲ್ಲಿ
ರವಿ ನಿಂತು ಮುಗಿಲ ಮರೆಯಲ್ಲಿ ನಗುವಂತೆ ನೋಡಿ ಧರೆಯನ್ನು
ನಿನ್ನಾಟ ಆ ತಂದ ತಾಪ ನನ್ನ ಮನಸಾ ತಾಕದೇನು
ಬರಿ ಕಣ್ಣು ಕಾಣದ ತಂಗಾಳಿ, ತಂದಂತೆ ಕಂಪಿನಾ ರಂಗೋಲಿ
ನೀ ನಿಂತೆಯೋ ಈ ಹೆಣ್ಣಲ್ಲಿ ನಿಜ ಬಂಧಿಯೂ ನೀನು ನನ್ನಲ್ಲಿ

ನರನಾಡಿಯ ವೀಣೆಯೋ ಮಿಡಿದಂತ ಸ್ವರ ಹೇಳಿದೆ
ಇವನೇನೆ ಆ ನನ್ನ ಪ್ರೇಮಿ
ಆ ಪ್ರೀತಿ ಮಳೆ ಬೀಳಲು ನೂರಾಸೆ ಹೂವಾಗಿದೆ
ನವ ಚೈತ್ರ ಕಂಡಂಥ ಭೂಮಿ
ಅಲೆ ನೂರು ಆಸೆ ಕಡಲಲ್ಲಿ ಹುಚ್ಚೆದ್ದು ಕುಣಿಯುತಿದೆ ಇಲ್ಲಿ
ಇದ ತಂದಾ ಚಂದ್ರ ಎಲ್ಲಿ, ಹೋದೆ ಯಾವ ದಿಕ್ಕಿನಲ್ಲಿ
ಸಾಕಿನ್ನು ಮಾತಿನ ಸಂದೇಶ, ಎದುರಲ್ಲೇ ಓ ಪ್ರಿಯ ಸಂತೋಷಾ
ನೀ ನಾಯಕ ಈ ಕಾವ್ಯಕೆ ಆ ಬ್ರಹ್ಮನು ತಂದಾ ಬಂಧಕೆ


Friday, November 16, 2012

ಎಲ್ಲೆಲ್ಲು ಸಂಗೀತವೇ


ಮಲಯ ಮಾರುತ (1986) - ಎಲ್ಲೆಲ್ಲು ಸಂಗೀತವೇ

ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ವಿಜಯಭಾಸ್ಕರ್
ಗಾಯನ: ಕೆ.ಜೆ.ಯೇಸುದಾಸ್
ಎಲ್ಲೆಲ್ಲು ಸಂಗೀತವೇ
ಎಲ್ಲೆಲ್ಲು ಸೌಂದರ್ಯವೇ
ಕೇಳುವ ಕಿವಿಯಿರಲು, ನೋಡುವ ಕಣ್ಣಿರಲು
ಎಲ್ಲೆಲ್ಲು ಸಂಗೀತ


ನಿಸ ನಿಸರಿಗ ಸರಿಗ ಸರಿಗ ಮಪದಮ 
ನಿಸ ದನಿದನಿ ಸನಿ, ನಿಸರಿಗ ಮಗಸನಿ
ನಿದಾದ ದಮಾಮ ಮಗಾಗ ಗಸಾಸ


ಎಲ್ಲೆಲ್ಲು ಸಂಗೀತವೇ||
ಸಂಧ್ಯೆಯು ಬಂದಾಗ ಆಗಸ ಅಂದಾ
ಆ ಉಷೆ ನಗುವಾಗ ಲೋಕವೆ ಚಂದಾ..


ಸರಿಗ ಸರಿಗ ಮಮ ಗಾಗ ಮಾಮ ಪದ
ಮಪದ ದ ಮಪದನಿ ಮಾಮ ಪಾಪ ದದ
ಪದನಿನಿ ಪದನಿ ಸಾಸ ನೀನಿ ಸನಿ
ಸರಿಗ ಸರಿಗ ಸನಿ ದಾದ ಮಾಮ ಗಗಸ


ಬಳುಕುವ ಲತೆಯಿಂದ ಅರಳಿದ ಹೂವಿಂದ
ಆ ಸುಮ ಚೆಲ್ಲುವ ಪರಿಮಳದಿಂದ||
ಎಲ್ಲೆಲ್ಲು ಸೌಂದರ್ಯವೇ..||
ಹರಿಯುವ ನೀರಲಿ ಕಲ ಕಲರವವೂ
ಕೋಗಿಲೆ ಕೊರಳಿನ ಸುಮಧುರ ಸ್ವರವೂ
ಭ್ರಮರದ ಝೇಂಕಾರ ಮುನಿಗಳ ಓಂಕಾರ
ಈ ಜಗ ತುಂಬಿದೆ ಮಾಧುರ್ಯದಿಂದಾ||
ಎಲ್ಲೆಲ್ಲು ಸಂಗೀತವೇ
ಸಂಗೀತ ಎಂದಿಗು ಸುರಗಂಗೆಯಂತೇ
ಸಂಗೀತ ಎಂದಿಗು ರವಿಕಾಂತಿಯಂತೇ|

(ಆಲಾಪನೆ)

ಬಿಸಿಲಲಿ ತಂಗಾಳಿ ಹೊಸ ಜೀವ ತಂದಂತೆ
ಆ ದೈವ ಸುಧೆಯಿಂದ ಪರಮಾರ್ಥವಂತೆ||

Sunday, August 5, 2012

ನನ್ನ ಇನಿಯನ ನೆಲೆಯ ಬಲ್ಲೆಯೇನೆ

ನನ್ನ ಇನಿಯನ ನೆಲೆಯ ಬಲ್ಲೆಯೇನೆ 
ಹೇಗೆ ತಿಳಿಯಲಿ ಅದನು ಹೇಳೇ ನೀನೆ 

ಇರುವೆ ಸರಿಯುವ ಸದ್ದು
ಮೊಗ್ಗು ಬಿರಿಯುವ ಸದ್ದು
ಮಂಜು ಇಳಿಯುವ ಸದ್ದು ಕೇಳಬಲ್ಲ
ನನ್ನ ಮೊರೆಯನು ಏಕೆ ಕೇಳಲೊಲ್ಲ

ಗಿರಿಯ ಎತ್ತಲು ಬಲ್ಲ
ಶರಧಿ ಬತ್ತಿಸಬಲ್ಲ
ಗಾಳಿ ಉಸಿರನೆ ಕಟ್ಟಿ ನಿಲ್ಲಿಸಬಲ್ಲ 
ನನ್ನ ಸೆರೆಯನು ಏಕೆ ಬಿಡಿಸಲೊಲ್ಲ

ನೀರು ಮುಗಿಲಾದವನು
ಮುಗಿಲು ಮಳೆಯಾದವನು 
ಮಳೆ ಬಿದ್ದು ತೆನೆಎದ್ದು ತೂಗುವವನು
ನಲ್ಲೆ ಅಳಲನು ಏಕೆ ತಿಳಿಯನವನು 

- ರಚನೆ: ಡಾ|| ಏನ್ ಎಸ್ ಲಕ್ಷ್ಮಿ ನಾರಾಯಣ ಭಟ್ಟ 

Tuesday, March 13, 2012

ಕ್ಷಣ ಹೊಸತು-ಯುಗಾದಿ

ಕ್ಷಣ ಹೊಸತು-ಯುಗಾದಿ
-----------------------------

ಹೊಸ ವರುಷದ ಹರುಷ ಹರಸಿದೆ
ಶಿಶಿರ ಹೊದಿಕೆಯ ಸರಿಸಿದೆ
ಬರಲು ಮರ ನೆಲಬಿರಿದ ಚಳಿ ಚಳಿ
ಮಗ್ಗುಲಾಗುತ ತೆರೆಳಿದೆ

ಹೂವು ಹಾಸಿದ ಹಾದಿಯಂಚಿಗೆ
ರಂಗವಲ್ಲಿಯ ಸೊಬಗಿದೆ
ಮಾವು ಮಲ್ಲಿಗೆ ಚಿಗುರು ಚೈತ್ರದ
ಹಕ್ಕಿ ಹಾಡಿನ ಇಂಪಿದೆ

ಮೋಡವಿಲ್ಲದ ಗಗನ ಪಥದಲಿ
ಸೂರ್ಯ ಚಂದ್ರರ ಸಂಗಮ
ಕಂಡು ಕಾಣದ ಚಂದ್ರ ರೇಖೆಯು
ಮೂಡೆ ಹರ್ಷದ ಸ್ಪಂದನ

ಹಿಂದೆ ಮುಂದಿದೆ ಕಾಲ ಹರಡಿದ
ಕ್ಷಣ ಹೊಸತು ಕ್ಷಣ ಆಶಯ
ಕತ್ತಲಂಚಿಗೆ ಬೆಳಕಿನೈಸಿರಿ
ಚಿಗುರು ಬೇವಿಗು ಸಿಹಿಬಲ

ಹಿತದ ಹೊಸ ಹೊಸ ಭಾವ ತುಂಬುವ
ನಸುನಗೆಯ ಒಡನಾಡಿಯ
ಬೆಸುಗೆಯಳಿಯದ ಚಿಗರು ತೂಗಲಿ
ಹೂವು ಹಣ್ಣಿನ ಗೊಂಚಲ

-ಗಜಾನನ ಈಶ್ವರ ಹೆಗಡೆ