Thursday, August 26, 2010

ನಾವು ಭಾರತೀಯರು

ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ
ಕರಾವಳಿಗೆ ಮುತ್ತನಿಡುವ ಪೆರ್ದೆರೆಗಳ ಗಾನದಲ್ಲಿ
ಬಯಲು ತುಂಬ ಹಸಿರ ದೀಪ ಹಚ್ಚಿ ಹರಿವ ನದಿಗಳಲ್ಲಿ
ನೀಲಿಯಲ್ಲಿ ಹೊಗೆಯ ಚಲ್ಲಿ ಯಂತ್ರ ಘೋಷವೇಳುವಲ್ಲಿ
ಕಣ್ಣು ಬೇರೆ, ನೋಟವೊಂದು-
ನಾವು ಭಾರತೀಯರು.

ನಾಡಿನೆಲ್ಲ ಗಡಿಗಳಲ್ಲಿ ಬಾನಿನಲ್ಲಿ ಕಡಲಿನಲ್ಲಿ
ನಮ್ಮ ಯೋಧರೆತ್ತಿ ಹಿಡಿದ ನಮ್ಮ ಧ್ವಜದ ನೆರಳಿನಲ್ಲಿ
ಒಂದೆ ನೆಲದ ತೊಟ್ಟಿಲಲ್ಲಿ ಬೆಳೆದ ನಮ್ಮ ಕೊರಲಿನಲ್ಲಿ
ನಮ್ಮ ಯುಗದ ದನಿಗಳಾಗಿ ಮೂಡಿದೆಲ್ಲ ಹಾಡಿನಲ್ಲಿ
ಭಾಷೆ ಬೇರೆ, ಭಾವವೊಂದು-
ನಾವು ಭಾರತೀಯರು.

ನಾಡಿಗಾಗಿ ತನುವ ತೆತ್ತ ಹುತಾತ್ಮರ ಸ್ಮರಣೆಯಲ್ಲಿ
ನಮ್ಮ ಕಷ್ಟದಲ್ಲು ನೆರೆಗೆ ನೆರೆಳನೀವ ಕರುಣೆಯಲ್ಲಿ
ದಾರಿ ಬಳಸಿ ಏರುವಲ್ಲಿ ಬಿರುಗಾಳಿಯೆ ಮೊಳಗುವಲ್ಲಿ
ನಮ್ಮ ಗುರಿಯ ಬೆಳಕಿನೆಡೆಗೆ ನಡೆವ ಧೀರ ಪಯಣದಲ್ಲಿ
ಎಲ್ಲೆ ಇರಲಿ, ನಾವು ಒಂದು-
ನಾವು ಭಾರತೀಯರು.

Monday, August 23, 2010

ಮಾನವನೆದೆಯಲಿ ಆರದೆ ಉರಿಯಲಿ

ರಚನೆ: ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಹಾಡಿರುವವರು: ಶಿವಮೊಗ್ಗ ಸುಬ್ಬಣ್ಣ

ಮಾನವನೆದೆಯಲಿ ಆರದೆ ಉರಿಯಲಿ
ದೇವರು ಹೆಚ್ಚಿದ ದೀಪ
ರೇಗುವ ದನಿಗೂ ರಾಗವು ಒಲಿಯಲಿ
ಮೂಡಲಿ ಮಧುರಾಲಾಪ

ಕೊಲ್ಲಲು ಎತ್ತಿದ ಕೈಗೂ ಗೊತ್ತಿದೆ
ಕೆನ್ನೆಯ ಸವರುವ ಪ್ರೀತಿ
ಇರಿಯುವ ಮುಳ್ಳಿನ ನಡುವೆಯೆ ನಗುವುದು
ಗುಲಾಬಿ ಹೂವಿನ ರೀತಿ...

ಉರಿಯನು ಕಾರುವ ಆಗಸ ತಾರದೆ
ತಂಪನು ತೀಡುವ ಮಳೆಯ?
ಲಾವಾರಸವನು ಕಾರುವ ಧರೆಯೇ
ನೀಡದೆ ಅನ್ನದ ಬೆಳೆಯ?

ಹಮ್ಮು ಬಿಮ್ಮುಗಳ ಮರುಳುಗಾಡಿನಲಿ
ಎಲ್ಲೋ ತಣ್ಣನೆ ಚಿಲುಮೆ
ತಾಪವ ಹರಿಸಿ ಕಾಪಾಡುವುದು
ಒಳಗೇ ಸಣ್ಣಗೆ ಒಲುಮೆ...

Monday, July 19, 2010

ಗಾಳಿಯೇ ನೋಡು ಬಾ

ಚಿತ್ರ: ಸಂಚಾರಿ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಅರ್ಜುನ್
ಹಾಡಿದವರು: ಸೋನು ನಿಗಮ್, ಶ್ರೇಯಾ ಘೋಷಲ್

ಒ ಸಾಯಾ ರೇ...ಓ.... ಓ....ಆ....ಓ...
ಗಾಳಿಯೇ ನೋಡು ಬಾ... ದೀಪದಾ ನರ್ತನಾ...
ರಾತ್ರಿಯೇ ನೀಡು ಬಾ...ಮಾಯದಾ ದರ್ಪಣಾ...
ನಿನ್ನಂತೆ ಕಾಡಿಲ್ಲಾ ಇನ್ನಾರು ನನ್ನಾ...
ನಿನ್ನಿಂದ ಈ ಪಾಡು ಇನ್ನೂನು ಚೆನ್ನಾ...
ಅದೆ ಪ್ರೀತಿಯಾ ಲಕ್ಷಣಾ.,.
ಗಾಳಿಯೇ ನೋಡು ಬಾ... ದೀಪದಾ ನರ್ತನಾ...

ಸಂಚಾರಿ ಮನ ಸೆರೆ ಆದ ಕ್ಷಣ ಇದೆ ಗೂಡಲ್ಲಿ ಚಂದ್ರೋದಯಾ...
ಸಿಹಿ ಆದ ಅಲೆ ಶುರುವಾದಗಲೆ ನಿಜ ಸಂಗಾತಿ ನೀನಾದೆಯಾ...
ಮ ಗ ಮ ರಿ ನೀ ನೀ ಸಾ...ಅ... ಆ...ಅ
ಮ ಗ ಮ ಗಾ ಮ ಸಾ ದಾ...ಅ... ಆ...ಅ
ಕನಸು ತಾ ಜಾರಿದೆ..
ನನಸು ಬೆರೆಸೋಣಾ...
ಅದೆ ಪ್ರೀತಿಯಾ ಲಕ್ಷಣಾ.,.
ಗಾಳಿಯೇ ನೋಡು ಬಾ... ದೀಪದಾ ನರ್ತನಾ...

ಹೆಸರನ್ನೂ ಸಹಾ.. ಮರೆವಂತಾ ಭಯಾ... ಇದುವೇನಿಂತ ಆಕರ್ಷಣೇ...
ಮರುಳಾದಾಗಲೇ...ಮರು ಜನ್ಮವಿದೆ...ಬಿಗಿ ಮೌನಾನೆ ಸಂಭಾಷಣೇ...
ಮ ಗ ಮ ರಿ ನೀ ನೀ ಸಾ...ಅ... ಆ...ಅ
ಮ ಗ ಮ ಗಾ ಮ ಸಾ ದಾ...ಅ... ಆ...ಅ
ಒಗಟು ಒಂದಾಗಿ
ಜೊತೆಯಾಗಿ ಬಿಡಿಸೋಣಾ...
ಅದೆ ಪ್ರೀತಿಯಾ ಲಕ್ಷಣಾ.,.

ಗಾಳಿಯೇ ನೋಡು ಬಾ... ದೀಪದಾ ನರ್ತನಾ...

Friday, March 5, 2010

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ

ಅಂಧಕಾರವ ಓಡಿಸು ಜ್ಞಾನ ಜ್ಯೋತಿಯ ಬೆಳಗಿಸು
ಹೃದಯ ಮಂದಿರದಲ್ಲಿ ನೆಲೆಸು ಚಿಂತೆಯಾ ಅಳಿಸು
ಶಾಂತಿಯಾ ಉಳಿಸು
ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ

ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಕಲೆಮ್ಮ ಬಾಳನೂ ಬೆಳಗಮ್ಮ
ನಮ್ಮ ಕೋರಿಕೆ ಆಲಿಸಮ್ಮ
ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ

ಒಳ್ಳೆ ಮಾತುಗಳಾಡಿಸು ಒಳ್ಳೆ ಕೆಲಸವ ಮಾಡಿಸು
ಒಳ್ಳೆ ದಾರಿಯಲೆಮ್ಮ ನಡೆಸು ವಿದ್ಯೆಯಾ ಕಲಿಸು
ಆಸೆ ಪೂರೈಸೂ
ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ

Thursday, January 7, 2010

ಹೇಳಿ ಹೋಗು ಕಾರಣ

ಕವಿ: ಬಿ.ಆರ್. ಲಕ್ಷ್ಮಣರಾವ್
ಸಂಗೀತ: ಸಿ. ಅಶ್ವಥ್

ಹೇಳಿ ಹೋಗು ಕಾರಣ ಹೋಗುವ ಮೊದಲು|
ನನ್ನ ಬಾಳಿನಿಂದ ದೂರಾಗುವ ಮೊದಲು ||

ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ
ಬೆಳಕಾದೆ ಬಾಳಿಗೆ
ಇಂದೇಕೆ ಹೀಗೆ ಬೆಳಕನ್ನು ತೊರೆದು
ನೀ ಸರಿದೆ ನೆರಳಿಗೆ ?
ಇಂದ್ಯಾವ ಬಂಧ ತೊಡರಿದೆ
ನಿನ್ನ ಕಾಲಿಗೆ ?
ಸುಡುಬೆಂಕಿ ಬೆಳಕು ಉಳಿಯಿತೆ
ನನ್ನ ಪಾಲಿಗೆ ?

ಸವಿಭಾವಗಳಿಗೆ ನೀ ನಾದ ನೀಡಿ
ಜೊತೆಗೂಡಿ ಹಾಡಿದೆ
ಇಂದ್ಯಾವ ಅಳಲು ? ಸೆರೆಯುಬ್ಬಿ ಕೊರಳು
ನೀ ಮೌನ ತಾಳಿದೆ
ನೀ ನೆಟ್ಟು ಬೆಳೆಸಿದ ಈ ಮರ
ಫಲ ತೊಟ್ಟ ವೇಳೆಗೆ
ಹೀಗೇಕೆ ಮುರಿದು ಉರುಳಿದೆ
ಯಾವ ದಾಳಿಗೆ ?

Tuesday, December 29, 2009

ನೇಗಿಲ ಹಿಡಿದ ಹೊಲದೊಳು ಹಾಡುತ

ನೇಗಿಲ ಹಿಡಿದ ಹೊಲದೊಳು ಹಾಡುತ
ಉಳುವಾ ಯೋಗಿಯ ನೋಡಲ್ಲಿ
ಫಲವನು ಬಯಸದೆ ಸೇವೆಯ ಪೂಜೆಯು
ಕರ್ಮವೆ ಇಹಪರ ಸಾಧನವು

ಕಷ್ಟದೊಳನ್ನವ ದುಡಿವನೆ ತ್ಯಾಗಿ
ಸೃಷ್ಟಿನಿಯಮದೊಳಗವನೇ ಭೋಗಿ
ಉಳುವಾ ಯೋಗಿಯ ನೋಡಲ್ಲಿ

ಲೋಕದೊಳೇನೇ ನಡೆಯುತಿರಲಿ
ತನ್ನೀ ಕಾರ್ಯವ ಬಿಡನೆಂದೂ
ರಾಜ್ಯಗಳುಳಿಸಲಿ ರಾಜ್ಯಗಳಳಿಯಲಿ
ಹಾರಲಿ ಗದ್ದುಗೆ ಮುಕುಟಗಳು

ಮುತ್ತಿಗೆ ಹಾಕಲಿ ಸೈನಿಕರೆಲ್ಲ
ಬಿತ್ತುಳುವುದನವ ಬಿಡುವುದೆ ಇಲ್ಲ
ಉಳುವಾ ಯೋಗಿಯ ನೋಡಲ್ಲಿ

ಬಾಳಿತು ನಮ್ಮೀ ನಾಗರಿಕತೆ ಸಿರಿ
ಮಣ್ಣೋಣಿ ನೇಗಿಲಿನಾಶ್ರಯದಿ
ನೇಗಿಲ ಹಿಡಿದ ಕೈಯಾದಾರದಿ
ದೊರೆಗಳು ದರ್ಪದೊಳಾಳಿದರು

ನೇಗಿಲ ಬಲದೊಳು ವೀರರು ಮೆರೆದರು
ಶಿಲ್ಪಿಗಳೆಸೆದರು, ಕವಿಗಳು ಬರೆದರು
ಉಳುವಾ ಯೋಗಿಯ ನೋಡಲ್ಲಿ

ಯಾರೂ ಅರಿಯದ ನೇಗಿಲ ಯೋಗಿಯೆ
ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ ಅತಿಸುಖ ಗಳಿಸದೆ
ದುಡಿದವನು ಗೌರವಕಾಶಿಸದೆ

ನೇಗಿಲ ಕುಲದೊಳಗಡಗಿದೆ ಕರ್ಮ
ನೇಗಿಲ ಮೇಲೆಯೆ ನಿಂತಿದೆ ಧರ್ಮ
ಉಳುವಾ ಯೋಗಿಯ ನೋಡಲ್ಲಿ

Friday, November 16, 2007

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ರಚನೆ: ಹುಯಿಲಗೋಳ ನಾರಾಯಣರಾವ್
ಸಂಗೀತ: ಪಿ. ಕಾಳಿಂಗರಾವ್

ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು.

ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು.

ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು
ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು.

ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಪೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು.